ಪ್ರೋಟಿಯಸ್
	ಗ್ರೀಕ್ ದೇವತೆಗಳಲ್ಲೊಬ್ಬ. ಅವರಂತೆ ಇವನೂ ಅಮರ. ಸಾಮಾನ್ಯವಾಗಿ ಅದೃಶ್ಯ, ಕಾಮರೂಪಿ, ದುಃಖನೋವುಗಳಿಲ್ಲದವ, ಒಳಿತು-ಕೆಡುಕನ್ನು ನಿರ್ಧರಿಸುವವ, ನ್ಯಾಯನಿರ್ಣಯವನ್ನು ಜಾರಿಗೆ ತರುವವ ಅಮೃತವನ್ನು ಆಹಾರವಾಗಿ ಉಳ್ಳವ.

	ಈತನನ್ನು ಗ್ರೀಕ್‍ಪುರಾಣಗಳು ಪೊಸೈಡನ್ ದೇವತೆಯ ಮಗನಂತೆ, ಆಳಿನಂತೆ, ಓಷನಸ್ ಮತ್ತು ತೆಟಿಸ್ಸರ ಮಗನಂತೆ, ಈಜಿಪ್ಟಿನ ರಾಜನಂತೆ, ಸಾಗರದ ವೃದ್ಧಮಾನವನಂತೆ, ನೈಲಾನದಿಯ ಹತ್ತಿರದ ಫಾರಸ್ ದ್ವೀಪದಲ್ಲಿ ಕ್ರೆಬ್ ಮತ್ತು ರ್ಹೋಡ್ಸ್‍ಗಳ ನಡುವಿನ ಕಾರ್ಪತಸ್ ದ್ವೀಪದ ಈಜಿಪ್ಟಸ್ ನದಿಯಲ್ಲಿ ವಾಸಿಸುವವನಂತೆ ಬಗೆಬಗೆಯಾಗಿ ಚಿತ್ರಿಸಿವೆ.

	ಈತ ಪೊಸೈಡನ್ ದೇವತೆಯ ಸೇರಿದ ಸಮುದ್ರಪ್ರಾಣಿಗಳನ್ನು ಕಾಯುವ ಕುರುಬನಾಗಿದ್ದರೂ ಕಾಲಜ್ಞಾನಿ, ಸತ್ಯವಾದ ಅಂಗುಲ ಅಂಗುಲವನ್ನೂ ಅರಿತವ. ಆದರೆ ಒತ್ತಾಯ ಬಂದ ಹೊರತೂ ತನ್ನ ಈ ಶಕ್ತಿಯನ್ನು ಇತರರ ಒಳಿತಿಗಾಗಿ ಬಳಸಲು ಇಷ್ಟವಿಲ್ಲದವ.

	ಸಾಮಾನ್ಯವಾಗಿ ನೀರಿನಲ್ಲೇ ಇರುವ ಈತ ಮಧ್ಯಾಹ್ನದ ಹೊತ್ತಿನಲ್ಲಿ ಪಶ್ಚಿಮದ ಗಾಳಿ ಬೀಸಲು ಪ್ರಾರಂಭಿಸಿದಾಗ ಅಲೆಗಳ ಮೇಲೆ ತೇಲಿ ದಂಡೆಗೆ ಬಂದು ಬಂಡೆ ಅಥವಾ ಗುಹೆಯ ಆಶ್ರಯದಲ್ಲಿ ಕಡಲಸಿಂಹಗಳ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಈತನ ಸಹಾಯವನ್ನು ಬಯಸುವವರಿಗೆ ಆ ಹೊತ್ತು ಬಹಳ ಅನುಕೂಲವಾದ್ದು. ಯಾರಾದರೂ ಸಮಯ ಸಾಧಿಸಿ ಈತನನ್ನು ಹಿಡಿದರೆ ಸಿಂಹ ಹಾವು ಕರಡಿ ಮರ ಬೆಂಕಿ ನೀರು ಇತ್ಯಾದಿ ಚಿತ್ರವಿಚಿತ್ರ ರೂಪಗಳನ್ನು ಧರಿಸಿ ಸಹಾಯ ಬೇಡಿ ಬಂದವರನ್ನು ಓಡಿಸುವ ಪ್ರಯತ್ನ ಮಾಡುತ್ತಾನೆ. ಈತನ ಈ ಎಲ್ಲ ಪಟ್ಟುಗಳಿಗೂ ಜಗ್ಗದಿದ್ದರೆ ತನ್ನ ರೂಪ ಧರಿಸಿ ಬಂದವರ ಬೇಡಿಕೆಯನ್ನು ಪೂರೈಸುತ್ತಾನೆ.

	ಮೆನೆಲಾಸ್ ದೊರೆ ಈತನ ಮಗಳಾದ ಇಡೋತಿಯಾ (ಐಯೋಡಿಯೋಸ್) ಎಂಬುವಳ ಸಲಹೆಯ ಮೇರೆಗೆ ಈತನನ್ನು ಬಂಧಿಸಿ ತನ್ನ ದೇಶಕ್ಕೆ ಹಿಂದಿರುಗುವ ಉಪಾಯವನ್ನು ತಿಳಿದನೆಂದು ಹೋಮರನ ಆಡಿಸಿ ತಿಳಿಸುತ್ತದೆ. 															(ಪಿ.ಎಚ್‍ಇ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ